ಸಿಐಟಿಯು ಅಧ್ಯಕ್ಷನ ಮಗಳ ಕೊಲೆ ಕೇಸ್‌ʼಗೆ ಟ್ವಿಸ್ಟ್‌: ತಂದೆ ಮೇಲಿನ ಸೇಡಿಗೆ ಮಗಳ ಕೊಲೆ..!

ಸೆಪ್ಟೆಂಬರ್ 19, 2025 - 18:00
 0  19
ಸಿಐಟಿಯು ಅಧ್ಯಕ್ಷನ ಮಗಳ ಕೊಲೆ ಕೇಸ್‌ʼಗೆ ಟ್ವಿಸ್ಟ್‌: ತಂದೆ ಮೇಲಿನ ಸೇಡಿಗೆ ಮಗಳ ಕೊಲೆ..!

ಕಲಬುರಗಿ: ಸೇಡಂ ತಾಲೂಕಿನ ಮಳಖೇಡ ಗ್ರಾಮದಲ್ಲಿ ಇಂಜಿನಿಯರಿಂಗ್ ವಿದ್ಯಾರ್ಥಿನಿ ಭಾಗ್ಯಶ್ರೀ ಸುಲಹಳ್ಳಿ (21) ಹತ್ಯೆ ಪ್ರಕರಣಕ್ಕೆ ಹೊಸ ಟ್ವಿಸ್ಟ್‌ ಸಿಕ್ಕಿದೆ. ಈ ದುಷ್ಕೃತ್ಯವು ಪ್ರೀತಿ–ದ್ವೇಷದ ಕತೆಯಲ್ಲ, ಬದಲಿಗೆ ಕಾರ್ಮಿಕ ಮತ್ತು ಕಾರ್ಖಾನೆ ಮಾಲೀಕನ ನಡುವಿನ ಹಳೆಯ ವೈಮನಸ್ಸು ಹಾಗೂ ಪ್ರತೀಕಾರವೇ ಕಾರಣ ಎಂದು ತನಿಖೆಯಿಂದ ಬಹಿರಂಗವಾಗಿದೆ.

ಕೆಲವು ವಾರಗಳ ಹಿಂದೆ ಅಲ್ಟ್ರಾಟೆಕ್ ಸಿಮೆಂಟ್ ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಿದ್ದ ವಿನೋದ ಎಂಬ ಯುವಕ ಉದ್ಯೋಗ ಕಳೆದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದ. ಈ ಘಟನೆಯಲ್ಲಿ ಕಾರ್ಮಿಕ ಸಂಘದ ಅಧ್ಯಕ್ಷ ಚನ್ನವೀರಪ್ಪ ಸುಲಹಳ್ಳಿ ಕಾರಣ ಎಂದು ವಿನೋದನ ಕುಟುಂಬ ಆರೋಪ ಮಾಡಿತ್ತು. ಇದೇ ಹಿನ್ನಲೆಯಲ್ಲಿ ದ್ವೇಷ ಬೆಳೆದು, ಚನ್ನವೀರಪ್ಪನನ್ನು ಗುರಿಯಾಗಿಸಲು ಯತ್ನಿಸಿದ ಆರೋಪಿಗಳು, ಆತ ಸಿಗದ ಕಾರಣ ಅವರ ಮಗಳನ್ನು ಕೊಲೆಮಾಡಿದ್ದಾರೆ ಎಂಬುದು ಶಂಕೆಯಾಗಿದೆ.

ಸೆಪ್ಟೆಂಬರ್ 11ರಂದು ಭಾಗ್ಯಶ್ರೀ ನಾಪತ್ತೆಯಾಗಿದ್ದಳು. ಬಳಿಕ ಕಾರ್ಖಾನೆ ಹತ್ತಿರದ ನಿರ್ಜನ ಪ್ರದೇಶದಲ್ಲಿ ಆಕೆಯ ಶವ ಏಳು ದಿನಗಳ ಬಳಿಕ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಯಿತು. ಪ್ರಾಥಮಿಕ ತನಿಖೆಯಲ್ಲಿ, ಕಬ್ಬಿಣದ ರಾಡ್‌ನಿಂದ ತಲೆಗೆ ಹೊಡೆದು ಕೊಲೆ ಮಾಡಲಾಗಿದೆ ಎಂಬುದು ಬೆಳಕಿಗೆ ಬಂದಿದೆ.

ಈ ಪ್ರಕರಣದಲ್ಲಿ ವಿನೋದನ ಸಹೋದರ ಮಂಜುನಾಥ್ ನನ್ನು ಪೊಲೀಸರು ವಶಕ್ಕೆ ಪಡೆದಿದ್ದು, ವಿಚಾರಣೆ ನಡೆಸುತ್ತಿದ್ದಾರೆ. ಮಂಜುನಾಥನ ತಂದೆ, ದೊಡ್ಡಪ್ಪ ಹಾಗೂ ಮತ್ತೊಬ್ಬ ಸಹೋದರನೂ ಹತ್ಯೆಯಲ್ಲಿ ಭಾಗಿಯಾಗಿರುವ ಶಂಕೆ ವ್ಯಕ್ತವಾಗಿದೆ. ಸದ್ಯ ಪೊಲೀಸರು ಹಳೆಯ ವೈಷಮ್ಯ, ಕಾರ್ಮಿಕ ಸಂಘದ ಒಳಗಲಾಟೆ ಹಾಗೂ ವೈಯಕ್ತಿಕ ದ್ವೇಷ ಎಲ್ಲದರ ಬಗ್ಗೆ ತನಿಖೆ ಮುಂದುವರೆಸಿದ್ದಾರೆ.

ನಿಮ್ಮ ಪ್ರತಿಕ್ರಿಯೆ ಏನು?

like

dislike

love

funny

angry

sad

wow