ಸಿನಿಮಾ ಮಾಡುವುದಾಗಿ ನಂಬಿಸಿ ನಟಿಗೆ ಲೈಂಗಿಕ ಕಿರುಕುಳ ಆರೋಪ: ನಕಲಿ ನಿರ್ಮಾಪಕನ ಬಂಧನ

ಅಕ್ಟೋಬರ್ 7, 2025 - 10:05
 0  10
ಸಿನಿಮಾ ಮಾಡುವುದಾಗಿ ನಂಬಿಸಿ ನಟಿಗೆ ಲೈಂಗಿಕ ಕಿರುಕುಳ ಆರೋಪ: ನಕಲಿ ನಿರ್ಮಾಪಕನ ಬಂಧನ

ಸಿನಿಮಾ ಮಾಡುವುದಾಗಿ ಹೇಳಿ ನಟಿಗೆ ಲೈಂಗಿಕ ಹಾಗೂ ಮಾನಸಿಕ ಕಿರುಕುಳ ನೀಡಿದ ನಕಲಿ ನಿರ್ಮಾಪಕನನ್ನು ರಾಜಾಜಿನಗರ ಪೊಲೀಸರು ಬಂಧಿಸಿದ್ದಾರೆ.

ಬಂಧಿತನನ್ನು ಅನ್ನಪೂರ್ಣೇಶ್ವರಿನಗರ ನಿವಾಸಿ ಹೇಮಂತ್ ಕುಮಾರ್ (34) ಎಂದು ಗುರುತಿಸಲಾಗಿದೆ. ಕಿರುತೆರೆ ನಟಿ ಹಾಗೂ ಬಿಗ್ ಬಾಸ್ ಸೀಸನ್ 11 ಸ್ಪರ್ಧಿ ನೀಡಿದ ದೂರಿನ ಮೇರೆಗೆ ಪೊಲೀಸರು ಕ್ರಮ ಕೈಗೊಂಡಿದ್ದಾರೆ.

 2022ರಲ್ಲಿ ಆರೋಪಿ ತಾನು ನಿರ್ದೇಶಕ ಹಾಗೂ ನಿರ್ಮಾಪಕ ಎಂದು ಹೇಳಿಕೊಂಡು, “ರಿಚ್ಚಿ” ಎಂಬ ಸಿನಿಮಾದಲ್ಲಿ ನಾಯಕಿಯಾಗಿ ನಟಿಸಬೇಕೆಂದು ನಟಿಗೆ ಆಫರ್ ನೀಡಿದ್ದ. ಇಬ್ಬರ ಮಧ್ಯೆ ₹2 ಲಕ್ಷ ಸಂಭಾವನೆಗೆ ಒಪ್ಪಂದವಾಗಿದ್ದು, ಮುಂಗಡವಾಗಿ ₹60 ಸಾವಿರ ನೀಡಲಾಗಿತ್ತು.

ಆದರೆ, ನಂತರ ಚಿತ್ರೀಕರಣವನ್ನು ಹಲವು ಬಾರಿ ಮುಂದೂಡುತ್ತಿದ್ದ ಆರೋಪಿ, ನಟಿಗೆ ಅಶ್ಲೀಲ ಉಡುಪು ಧರಿಸಿ ನಟಿಸಬೇಕೆಂದು ಒತ್ತಾಯಿಸಿದ್ದ. ಅಲ್ಲದೆ, ಚಿತ್ರೀಕರಣದ ವೇಳೆ ಅಸಭ್ಯವಾಗಿ ವರ್ತನೆ ಹಾಗೂ ಅಸಭ್ಯ ಸ್ಪರ್ಶ ಮಾಡುತ್ತಿದ್ದಾನೆಂದು ನಟಿ ದೂರಿನಲ್ಲಿ ತಿಳಿಸಿದ್ದಾರೆ.

ಚಿತ್ರೀಕರಣ ಮುಗಿದ ಬಳಿಕ, ಬಾಕಿ ಹಣದ ಚೆಕ್ ಬೌನ್ಸ್ ಆಗಿತ್ತು. ವಿಚಾರಿಸಿದಾಗ ಆರೋಪಿ ನಟಿಯ ಒಪ್ಪಂದ ಪತ್ರ ಹಾಗೂ ಮೊಬೈಲ್ ನಂಬರನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿದ್ದಾನೆ.

ಇದೇ ರೀತಿ 2025ರ ಸೆಪ್ಟೆಂಬರ್ 17ರಂದು ಮದ್ಯದ ಅಮಲಿನಲ್ಲಿ ಕರೆ ಮಾಡಿ ನಟಿ ಮತ್ತು ಅವರ ತಾಯಿಗೆ ಪ್ರಾಣ ಬೆದರಿಕೆ ಹಾಕಿದ್ದಾನೆ. 

ಅದೇ ವೇಳೆ, “ರಿಚ್ಚಿ” ಸಿನಿಮಾದ ಸೆನ್ಸಾರ್ ಆಗದ ದೃಶ್ಯಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡಿದ ಆರೋಪವೂ ಇದೆ. ನಟಿ ಈ ಕುರಿತು ನ್ಯಾಯಾಲಯದಿಂದ ತಡೆಯಾಜ್ಞೆ ಪಡೆದಿದ್ದಾರೆ.

ಆರೋಪಿ ಇದೇ ರೀತಿಯಲ್ಲಿ ಇನ್ನೂ ಕೆಲ ನಟಿಯರನ್ನೂ ಮೋಸಮಾಡಿರುವ ಶಂಕೆಯಿದೆ.

ನಿಮ್ಮ ಪ್ರತಿಕ್ರಿಯೆ ಏನು?

like

dislike

love

funny

angry

sad

wow