ಸುರ್ಜೇವಾಲ ಭೇಟಿ ಎಫೆಕ್ಟ್: 'ಕೈ' ಶಾಸಕರ ಕ್ಷೇತ್ರಗಳಿಗೆ ಮಾತ್ರ 50 ಕೋಟಿ ರೂಪಾಯಿ ಅನುದಾನ!

ಬೆಂಗಳೂರು: ಕರ್ನಾಟಕ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲ ಅವರು ಬೆಂಗಳೂರಿಗೆ ಭೇಟಿ ನೀಡಿ ಸಚಿವರು ಮತ್ತು ಶಾಸಕರೊಂದಿಗೆ ನಡೆಸಿದ ವೈಯಕ್ತಿಕ ಮಾತುಕತೆಗಳ ನಂತರ, ಮಹತ್ವದ ರಾಜಕೀಯ ಬೆಳವಣಿಗೆಯೊಂದು ಕಂಡುಬಂದಿದೆ. ಇದರ ಭಾಗವಾಗಿ, ಮುಖ್ಯಮಂತ್ರಿ ಸಿದ್ದರಾಮಯ್ಯನವರು ಕಾಂಗ್ರೆಸ್ ಶಾಸಕರ ಕ್ಷೇತ್ರಗಳಿಗೆ ತಲಾ 50 ಕೋಟಿ ರೂ.ಗಳಷ್ಟು ಅನುದಾನ ಬಿಡುಗಡೆ ಮಾಡಿದ್ದಾರೆ.
ಕಾಂಗ್ರೆಸ್ ಶಾಸಕರಿಗೆ ತಲಾ 50 ಕೋಟಿ ರೂ. ಅನುದಾನ ಬಿಡುಗಡೆಗೆ ಸಿಎಂ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ. ಲೋಕೋಪಯೋಗಿ ಇಲಾಖೆ ಅಡಿ 37.50 ಕೋಟಿ ರೂ., ಶಾಸಕರ ವಿವೇಚನಾಧಿಕಾರದ ಅಡಿ ಹಾಗೂ ಇತರೆ ಇಲಾಖೆ ಕಾಮಗಾರಿಗೆ 12.50 ಕೋಟಿ ರೂ. ಅನುದಾನ ಬಿಡುಗಡೆ ಮಾಡೋ ಬಗ್ಗೆ ಸಿಎಂ ಎಲ್ಲಾ ಶಾಸಕರಿಗೆ ಪತ್ರ ಬರೆದಿದ್ದಾರೆ.
ಅನುದಾನ ಬಿಡುಗಡೆಗೂ ಮುನ್ನ ಸಿಎಂ ಕಾಂಗ್ರೆಸ್ ಶಾಸಕರ ಜೊತೆ ಒನ್ ಟು ಒನ್ ಸಭೆ ನಡೆಸಲಿದ್ದಾರೆ. ಜುಲೈ 30 ಮತ್ತು 31ರಂದು ಸಿಎಂ ಶಾಸಕರ ಜೊತೆ ಸಭೆ ನಡೆಸಲಿದ್ದಾರೆ. ಈ ಸಭೆಗೆ ಶಾಸಕರು ಬೇಡಿಕೆ ಪತ್ರದೊಂದಿಗೆ ಕಾಮಗಾರಿ ವಿವರಗಳನ್ನು ನೀಡುವಂತೆ ಸಿಎಂ ತಿಳಿಸಿದ್ದಾರೆ. ಶಾಸಕರ ಜೊತೆ ಸಭೆ ಬಳಿಕ ಅನುದಾನ ಬಿಡುಗಡೆ ಆಗುವ ಸಾಧ್ಯತೆ ಇದೆ.
ನಿಮ್ಮ ಪ್ರತಿಕ್ರಿಯೆ ಏನು?






