ಸ್ವಂತ ಮಗಳನ್ನೇ ಕೊಂದು ಆತ್ಮಹತ್ಯೆ ಕಥೆ ಕಟ್ಟಿದ ತಂದೆ..! ಮುಂದೇನಾಯ್ತು..?
ಗುಜರಾತ್: ಲಿವ್-ಇನ್ ಸಂಬಂಧದಲ್ಲಿದ್ದ ಮಗಳನ್ನು ತಂದೆಯೇ ಕೊಲೆ ಮಾಡಿ, ಆಕೆ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂಬ ನಕಲಿ ಕಥೆ ಸೃಷ್ಟಿಸಿರುವ ಘಟನೆ ಗುಜರಾತ್ನ ಬನಾಸ್ಕಾಂಠದಲ್ಲಿ ನಡೆದಿದೆ. ಘಟನೆ ಕುರಿತು ಪೊಲೀಸರಿಗೆ ನೀಡಲಾದ ದೂರಿನಲ್ಲಿ, ಪೋಷಕರು ಮಗಳ ಅಂತ್ಯಕ್ರಿಯೆಯನ್ನೂ ಸಹ ತಮ್ಮ ಸಹೋದರ ಸಹಾಯದಿಂದ ರಾತ್ರೋರಾತ್ರಿ ಮುಗಿಸಿರುವುದು ಬೆಳಕಿಗೆ ಬಂದಿದೆ.
ಈ ಘಟನೆ ಹಿಂದಿನ ಹಿನ್ನೆಲೆಯು ಬಹಳ ಗಂಭೀರವಾಗಿದ್ದು, ಪ್ರಕರಣ ಈಗ ಗಂಭೀರ ತಿರುವು ಪಡೆದುಕೊಂಡಿದೆ. ಬನಾಸ್ಕಾಂಠ ನಿವಾಸಿ ಚಂದ್ರಿಕಾ ಎಂಬ ಯುವತಿ ಮತ್ತು ಹರೀಶ್ ಎಂಬ ಯುವಕ ಫೆಬ್ರವರಿಯಲ್ಲಿ ಪಾಲನ್ಪುರದಲ್ಲಿ ಪರಿಚಯವಾಗಿದ್ದರು. ನಂತರ ಇವರ ನಡುವೆ ಪ್ರೀತಿ ಬೆಳೆಯಿತು. ಜೂನ್ನಲ್ಲಿ ಅವರು ಅಹಮದಾಬಾದ್ನಲ್ಲಿ ಲಿವ್-ಇನ್ ಒಪ್ಪಂದಕ್ಕೆ ಸಹಿ ಹಾಕಿದ್ದರು.
ಆದರೆ ಚಂದ್ರಿಕಾ ಪೋಷಕರು ಅವರ ಸಂಬಂಧವನ್ನು ಒಪ್ಪಲಿಲ್ಲ. ಜೂನ್ 12ರಂದು ಪೊಲೀಸರು ಯುವತಿಯನ್ನು ಪತ್ತೆ ಮಾಡಿ, ಕುಟುಂಬದ ವಶಕ್ಕೆ ಒಪ್ಪಿಸಿದ್ದರು. ಹರೀಶ್ನನ್ನು ಬಂಧಿಸಲಾಗಿತ್ತು. ಜೂನ್ 21 ರಂದು ಜಾಮೀನಿನ ಮೇಲೆ ಬಿಡುಗಡೆಗೊಂಡ ಬಳಿಕ, ಹರೀಶ್ ಅವರ ಫೋನ್ನಲ್ಲಿ ಚಂದ್ರಿಕಾದ ಮೆಸೇಜ್ಗಳು, ಇನ್ಸ್ಟಾಗ್ರಾಂ ಸಂಭಾಷಣೆಗಳ ಮೂಲಕ ಆಕೆಗೆ ಬೇರೆ ಮದುವೆ ಒತ್ತಡವಿತ್ತು ಎಂಬುದು ಬಹಿರಂಗವಾಯಿತು.
ಹರೀಶ್ ಜೂನ್ 24 ರಂದು ಗುಜರಾತ್ ಹೈಕೋರ್ಟ್ಗೆ ಹೇಬಿಯಸ್ ಕಾರ್ಪಸ್ ಅರ್ಜಿ ಸಲ್ಲಿಸಿದ್ದರು. ಆದರೆ ಅದೇ ದಿನ ಚಂದ್ರಿಕಾದ ಆತ್ಮಹತ್ಯೆಯ ಸುದ್ದಿ ಹರಡಿಸಲಾಯಿತು. ಆತ್ಮಹತ್ಯೆಗೆ ತಂದೆ ಮತ್ತು ಚಿಕ್ಕಪ್ಪನ ಕೈಚಳಕ ಎನ್ನುವ ಆರೋಪ ಹೊರವಾಗಿದೆ. ಹರೀಶ್ ನೀಡಿದ ದೂರಿನ ಮೇರೆಗೆ ಪ್ರಕರಣವನ್ನು ಪೊಲೀಸರು ಪುನರ್ ತನಿಖೆ ನಡೆಸುತ್ತಿದ್ದಾರೆ. ಈ ಕುರಿತು ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗುತ್ತಿದೆ.
ನಿಮ್ಮ ಪ್ರತಿಕ್ರಿಯೆ ಏನು?