ಹಾಸನಾಂಬೆ ಭಕ್ತರಿಗೆ ಗುಡ್ ನ್ಯೂಸ್: ವಾಟ್ಸಾಪ್ ಚಾಟ್ ಮೂಲಕವೇ ನೀವು ಟಿಕೆಟ್ ಪಡೆಯಬಹುದು.!
ಹಾಸನ: ವರ್ಷಕ್ಕೊಮ್ಮೆ ಭಕ್ತರಿಗೆ ದರ್ಶನ ಭಾಗ್ಯ ಕರುಣಿಸುವ ಹಾಸನಾಂಬೆ ದೇವಾಲಯದ ದರ್ಶನೋತ್ಸವಕ್ಕೆ ದಿನಾಂಕ ನಿಗದಿಯಾಗಿದೆ. ಈ ವರ್ಷ ಅಕ್ಟೋಬರ್ 9 ರಿಂದ 23 ರವರೆಗೆ ಭಕ್ತರಿಗೆ ಹಾಸನಾಂಬೆ ದರ್ಶನ ಸಿಗಲಿದೆ.
ವರ್ಷಕ್ಕೆ ಒಂದು ಬಾರಿ ಮಾತ್ರ ದರ್ಶನಕ್ಕೆ ಅವಕಾಶ ಸಿಗುವ ಹಾಸನಾಂಬೆ ದೇವಾಲಯದಲ್ಲಿ ಸಾರ್ವಜನಿಕರಿಗೆ ಸುಗಮ ದರ್ಶನಕ್ಕೆ ಒತ್ತು ನೀಡುವ ಗುರಿಯೊಂದಿಗೆ ಜಿಲ್ಲಾಡಳಿತ ಕೆಲವು ಹೊಸ ನಿಯಮವನ್ನು ಜಾರಿಗೆ ತಂದಿದೆ. ವಿಐಪಿ ಪದ್ಧತಿಗೆ ಕೋಕ್ ಕೊಟ್ಟು, ಹೊಸದಾಗಿ ಗೋಲ್ಡ್ ಪಾಸ್ ವ್ಯವಸ್ಥೆಯನ್ನು ಜಾರಿಗೆ ತರಲು ತೀರ್ಮಾನಿಸಲಾಗಿದೆ.
ಅದಲ್ಲದೆ ದೇವಿಯ ಭಕ್ತರಿಗಾಗಿ ಆಡಳಿತ ಮಂಡಳಿ ವಾಟ್ಸಾಪ್ ಚಾಟ್ ಮೂಲಕ ಆನ್ಲೈನ್ ನೆರವು ನೀಡುವ ಯೋಜನೆ ಹಮ್ಮಿಕೊಂಡಿದೆ. ಟಿಕೆಟ್ ಬುಕಿಂಗ್, ದರ್ಶನ ಸಮಯ, ಸರತಿ ಸಾಲುಗಳ ಸ್ಥಿತಿಗತಿ, ಇ-ಹುಂಡಿ ಸೇರಿ ಹಲವು ಮಾಹಿತಿ ಆನ್ಲೈನ್ ಮೂಲಕ ಲಭ್ಯವಾಗಲಿದೆ.6366105589 ನಂಬರ್ಗೆ ಮೆಸೇಜ್ ಮಾಡಿದರೆ ಯಾವ್ಯಾವ ದಿನ, ಎಷ್ಟು ಗಂಟೆಗೆ ದರ್ಶನ ಎನ್ನುವ ಮಾಹಿತಿಯೂ ಆನ್ಲೈನ್ನಲ್ಲಿ ತಿಳಿಯಲಿದೆ.
ಹಾಸನಾಂಬೆ ದರ್ಶನಕ್ಕೆ ಆಗಮಿಸುವ ಲಕ್ಷ ಲಕ್ಷ ಭಕ್ತರಿಗೆ ಯಾವುದೇ ಅನಾನುಕೂಲ ಆಗದಿರಲಿ ಎನ್ನುವ ಕಾರಣಕ್ಕೆ ಟೆಂಟ್ಗಳ ವ್ಯವಸ್ಥೆ, ಗಣ್ಯರಿಗಾಗಿ ವಿಶೇಷ ಸಾಲು, ವಿಶೇಷ ದರ್ಶನಕ್ಕೆ ಹಣ ಕೊಟ್ಟು ಬರುವ ಭಕ್ತರಿಗೆ ಪ್ರತ್ಯೇಕ ಸರತಿ ಸಾಲು, ಹೀಗೆ ಯಾವ ಭಕ್ತರಿಗೂ ಸಮಸ್ಯೆ ಆಗದಂತೆ ದರ್ಶನ ಮಾಡಲು ಬೇಕಾದ ವ್ಯವಸ್ಥೆಗಳ ನಿರ್ಮಾಣ ಕಾರ್ಯ ಶುರುವಾಗಿದೆ.
ಕಳೆದ ವರ್ಷ ಹಾಸನಾಂಬೆ ದರ್ಶನಕ್ಕೆ ಬರೊಬ್ಬರಿ 20 ಲಕ್ಷಕ್ಕೂ ಅಧಿಕ ಭಕ್ತರು ಆಗಮಿಸಿದ್ದ ಹಿನ್ನೆಲೆಯಲ್ಲಿಈ ವರ್ಷ ಮತ್ತಷ್ಟು ಭಕ್ತರ ಸಂಖ್ಯೆ ಹೆಚ್ಚಾಗುವ ನಿರೀಕ್ಷೆ ಇದ್ದು, ಅದನ್ನು ಗಮನದಲ್ಲಿಟ್ಟುಕೊಂಡೇ ಹಾಸನಾಂಬೆ ಮಹೋತ್ಸವಕ್ಕೆ ತಯಾರಿ ಶುರುವಾಗಿದೆ.
ನಿಮ್ಮ ಪ್ರತಿಕ್ರಿಯೆ ಏನು?