ಜ. 20 ದುನಿಯಾ ವಿಜಯ್ ಬರ್ತಡೇ: ಅಭಿಮಾನಿಗಳಿಗೆ ವಿಶೇಷ ಮನವಿ ಮಾಡಿದ 'ಭೀಮ'!

ಕನ್ನಡ ಚಿತ್ರರಂಗದ ಸಲಗ ದುನಿಯಾ ವಿಜಯ್ ಅವರ ಹುಟ್ಟುಹಬ್ಬಕ್ಕೆ ಕ್ಷಣಗಣನೆ ಶುರುವಾಗಿದ್ದು, ಈ ಹೊತ್ತಲ್ಲೇ ಅಭಿಮಾನಿಗಳಿಗೆ ನಟ ದುನಿಯಾ ಅವರು ಶಾಕಿಂಗ್ ಹೇಳಿಕೆ ಕೊಟ್ಟಿದ್ದಾರೆ.
ಜನವರಿ 20 ರಂದು ದುನಿಯಾ ವಿಜಯ್ ಅವರು 51ನೇ ವರ್ಷಕ್ಕೆ ಕಾಲಿಡುತ್ತಿದ್ದಾರೆ. ಆದರೆ ಈ ಸುಸಂದರ್ಭವನ್ನು ಆಚರಣೆ ಮಾಡಿಕೊಳ್ಳುತ್ತಿಲ್ಲ ಎಂದು ದುನಿಯಾ ವಿಜಯ್ ಅವರು ಹೇಳಿದ್ದಾರೆ. ಇದರಿಂದ ಅವರ ಅಭಿಮಾನಿಗಳ ಮನಸಿಗೆ ಕೊಂಚ ಘಾಸಿಯಾದಂತೆ ಆಗಿದೆ ಎನ್ನಲಾಗಿದೆ.
ಪ್ರತಿ ವರ್ಷವೂ ನನ್ನ ಹುಟ್ಟು ಹಬ್ಬವನ್ನು ನಿಮ್ಮ ಮನೆಯ, ಊರಿನ ಹಬ್ಬವನ್ನಾಗಿ ಅಭಿಮಾನಿಗಳು ಆಚರಣೆ ಮಾಡಿದ್ದೀರಿ. ಈ ಬಾರಿನು ನಿಮ್ಮ ಜೊತೆ ಬರ್ತ್ಡೇ ಸೆಲೆಬ್ರೆಷನ್ ಮಾಡಿಕೊಳ್ಳಬೇಕು ಎನ್ನುವ ಆಸೆ ಇತ್ತು. ಆದರೆ ಹೊಸ ಸಿನಿಮಾದ ಕೆಲಸದ ಜವಾಬ್ದಾರಿ ಇರುವುದರಿಂದ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿಲ್ಲ.
ಪ್ರತಿ ಬಾರಿಯಂತೆ ಈ ಸಲ ನನ್ನ ತಂದೆ, ತಾಯಿ ಸಮಾಧಿ ಬಳಿ ನಾನು ಸಿಗುವುದಿಲ್ಲ. ಅಂದು ಜಡೇಶ್ ಹಂಪಿ ಅವರು ನಿರ್ದೇಶನ ಮಾಡುತ್ತಿರುವ ವಿಕೆ29 ಸಿನಿಮಾದ ಶೂಟಿಂಗ್ನಲ್ಲಿ ಇರುತ್ತೇನೆ. ಅಂದು ನಿಮಗಾಗಿ ವಿಕೆ29 ಸಿನಿಮಾದ ಫಸ್ಟ್ ಲುಕ್ ರಿವೀಲ್ ಮಾಡಲಾಗುತ್ತದೆ. ಅಲ್ಲದೇ ಶನಿವಾರ ಹಾಗೂ ಭಾನುವಾರ ಕೂಡ ಮನೆಯಲ್ಲಿ ಇರಲ್ಲ. ಹೀಗಾಗಿ ಯಾರು ಕೂಡ ಮನೆ ಬಳಿ ಬರಬಾರದು ಎಂದು ದುನಿಯಾ ವಿಜಯ್ ಅವರು ಮನವಿ ಮಾಡಿಕೊಂಡಿದ್ದಾರೆ.
ನಿಮ್ಮ ಪ್ರತಿಕ್ರಿಯೆ ಏನು?






