ಮಂಡ್ಯ ಗಲಭೆ ಪ್ರಕರಣ ಮ್ಯಾಜಿಸ್ಟ್ರೇಟ್ ತನಿಖೆ ಮಾಡಿ ತಪ್ಪಿತಸ್ಥರಿಗೆ ನೀಡಲಿ: ಬಸವರಾಜ ಬೊಮ್ಮಾಯಿ
ನವದೆಹಲಿ: ಮಂಡ್ಯ ಜಿಲ್ಲೆಯ ಮದ್ದೂರಿನಲ್ಲಿ ನಡೆದ ಘಟನೆ ಪೂರ್ವನಿಯೋಜಿತ ಕೃತ್ಯವಾಗಿದೆ. ಅಲ್ಲಿ ಪೊಲೀಸ್ ಇಲಾಖೆ ಹಾಗೂ ಸರ್ಕಾರದ ವೈಫಲ್ಯವಾಗಿದ್ದು, ಓಲೈಕೆ ರಾಜಕಾರಣದ ಪರಿಣಾಮ ಈ ಗಲಭೆಯಾಗಿದ್ದು, ಈ ಬಗ್ಗೆ ಮ್ಯಾಜಿಸ್ಟ್ರೇಟ್ ತನಿಖೆ ನಡೆಸಿ ತಪ್ಪಿತಸ್ಥರಿಗೆ ಕಠಿಣ ಶಿಕ್ಷೆ ನೀಡಬೇಕು ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ಆಗ್ರಹಿಸಿದ್ದಾರೆ.
ನವ ದೆಹಲಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಮದ್ದೂರಿನಲ್ಲಿ ಗಣೇಶೋತ್ಸವ ಮೆರವಣಿಗೆ ವೇಳೆ ಕಲ್ಲುಗಳನ್ನು ಶೇಖರಣೆ ಮಾಡಿ ತೂರಾಟ ಮಾಡಿದ್ದಾರೆ. ಫೊಲಿಸ್ ಇಲಾಖೆಯ ಸೂಕ್ತ ಬಂದೊಬಸ್ತ್ ಮಾಡಿಕೊಳ್ಳುವಲ್ಲಿ ಸಂಪೂರ್ಣ ವಿಫಲವಾಗಿದೆ.
ಘಟನೆಯ ನಂತರ ಪೊಲೀಸರು ಸ್ಥಳಕ್ಕೆ ತೆರಳಿದ್ದಾರೆ. ಘಟನೆಯಲ್ಲಿ ಅಮಾಯಕರನ್ನು ಬಂಧಿಸಿದ್ದಾರೆ. ಇಂದು ಹಿಂದೂ ಸಂಘಟನೆಗಳು ಪ್ರತಿಭಟನೆ ಮಾಡಿದರೆ ಅವರ ಮೇಲೆ ಪೊಲಿಸರು ವಿನಾಕಾರಣ ಲಾಠಿಚಾರ್ಜ್ ಮಾಡಿದ್ದಾರೆ. ಪೊಲೀಸರು ದಮನಕಾರಿ ನೀತಿ ಅನುಸರಿಸಿದ್ದಾರೆ ಎಂದು ಆರೋಪಿಸಿದರು.
ಸಂವಿಧಾನದ ಬಗ್ಗೆ ಬಹಳ ಮಾತನಾಡುವಂತಹ ಸಿಎಂ ಸಿದ್ದರಾಮಯ್ಯ ಅವರು ಸಂವಿಧಾನದಲ್ಲಿ ಎಲ್ಲ ಧರ್ಮಿಯರಿಗೆ ಅವರವರ ಧರ್ಮ ಆಚರಣೆ ಮಾಡಲು ಅವಕಾಶ ಇದೆ. ಈದ್ ಮಿಲಾದ್ ಹಬ್ಬ ರಾಜ್ಯಾದ್ಯಂತ ಶಾಂತ ರೀತಿಯಿಂದ ನಡೆಯುತ್ತದೆ. ಆದರೆ, ಗಣೇಶನ ಹಬ್ಬದಲ್ಲಿ ಶಾಂತಿ ಕದಡಿ ಹಿಂಸಾತ್ಮಕವಾಗಿ ಮಾಡಬೇಕು ಎನ್ನುವ ಹುನ್ನಾರದಿಂದ ಈ ರೀತಿ ಮಾಡಿದ್ದಾರೆ.
ಗಣೇಶನ ಹಬ್ಬದಲ್ಲಿ ಪೊಲೀಸರು ಪೂಜೆಗೆ, ಮೆರವಣಿಗೆಗೆ, ಸೌಂಡ್ ಸಿಸ್ಟಮ್ ಗೆ ಎಲ್ಲದಕ್ಕೂ ನಿರ್ಬಂಧ ಹೇರುತ್ತಾರೆ. ಇದು ಸಂವಿಧಾನ ವಿರೋಧಿ ಅಲ್ಲವೇ? ಪೊಲೀಸರು ಎಲ್ಲ ಸಮುದಾಯಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡು ಆಚರಣೆಗೆ ಅವಕಾಶ ನೀಡಬಹುದು. ಶಿವಮೊಗ್ಗ, ಚಿತ್ರದುರ್ಗ, ಉತ್ತರ ಕರ್ನಾಟಕ ಎಲ್ಲ ಕಡೆ ಶಾಂತ ರೀತಿಯಾಗಿ ಗಣೇಶೋತ್ಸವ ಮೆರವಣಿಗೆ ನಡೆದಿದೆ. ಮಂಡ್ಯದಲ್ಲಿ ಯಾಕೆ ಮಾಡಲು ಆಗಲಿಲ್ಲ. ಮಂಡ್ಯದಲ್ಲಿ ಪೊಲೀಸರು ಮತ್ತು ಸರ್ಕಾರದ ವೈಫಲ್ಯವಾಗಿದೆ ಎಂದು ಹೇಳಿದರು.
ನಿಮ್ಮ ಪ್ರತಿಕ್ರಿಯೆ ಏನು?