Hasanamba Temple: ಭಕ್ತರಿಗೆ ದರ್ಶನ ಕೊಡಲು ಸಿದ್ಧವಾದ ಹಾಸನಾಂಬೆ! ಡ್ರೆಸ್ ಕೋಡ್ ಕಡ್ಡಾಯ
ಹಾಸನ: ವರ್ಷಕ್ಕೊಮ್ಮೆ ಮಾತ್ರ ಭಕ್ತರಿಗೆ ದರ್ಶನ ನೀಡುವ ಹಾಸನದ ಅಧಿದೇವತೆ ಹಾಸನಾಂಬೆಯ ದರ್ಶನೋತ್ಸವ ನಾಳೆಯಿಂದ (ಅಕ್ಟೋಬರ್ 9) ಆರಂಭಗೊಳ್ಳಲಿದೆ. ಈ ಬಾರಿ ಉತ್ಸವ ಅಕ್ಟೋಬರ್ 9ರಿಂದ 23ರವರೆಗೆ ನಡೆಯಲಿದ್ದು, ಅಕ್ಟೋಬರ್ 10ರಿಂದ 22ರ ತನಕ ಸಾರ್ವಜನಿಕರಿಗೆ ದೇವಿಯ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ.
ಜಾತ್ರಾ ಮಹೋತ್ಸವದ ಎಲ್ಲಾ ಅಗತ್ಯ ತಯಾರಿಗಳನ್ನು ಜಿಲ್ಲಾಡಳಿತ ಕೈಗೊಂಡಿದ್ದು, ಈ ಬಾರಿ ದರ್ಶನ ವ್ಯವಸ್ಥೆಯಲ್ಲಿ ಕೆಲವು ಬದಲಾವಣೆಗಳನ್ನು ಮಾಡಲಾಗಿದೆ ಎಂದು ಹಾಸನ ಜಿಲ್ಲಾಧಿಕಾರಿ ಕೆ.ಎಸ್. ಲತಾ ಕುಮಾರಿ ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿ, “ಭಕ್ತರಿಗೆ ಸುಗಮ ದರ್ಶನದ ವ್ಯವಸ್ಥೆ ಮಾಡಲಾಗಿದೆ. ಸಾಮಾನ್ಯ ದರ್ಶನಕ್ಕೆ ಒಂದು ಸಾಲು, ಟಿಕೆಟ್ ಖರೀದಿಸಿದ ಭಕ್ತರಿಗೆ ಎರಡು ಸಾಲು ಹಾಗೂ ಶಿಷ್ಟಾಚಾರ ದರ್ಶನಕ್ಕೆ ಒಂದು ಸರತಿ ಸಾಲು ಇರಲಿದೆ. ಬೆಳಿಗ್ಗೆ 10.30ರಿಂದ 12.30ರವರೆಗೆ ಮಾತ್ರ ವಿಐಪಿಗಳಿಗೆ ದರ್ಶನಕ್ಕೆ ಅವಕಾಶ ಇರುತ್ತದೆ. ಗಣ್ಯರ ಜೊತೆ ನಾಲ್ವರಿಗೆ ಮಾತ್ರ ಶಿಷ್ಟಾಚಾರ ದರ್ಶನ ನೀಡಲಾಗುವುದು. ವಿಐಪಿಗಳು ಮುಂಚಿತವಾಗಿ ಮಾಹಿತಿ ನೀಡಿ ಬರಬೇಕು,” ಎಂದು ಹೇಳಿದರು.
ಗೋಲ್ಡ್ ಕಾರ್ಡ್ ಪಡೆದ ಭಕ್ತರಿಗೆ ಬೆಳಿಗ್ಗೆ 7.30ರಿಂದ 10 ಗಂಟೆಯವರೆಗೆ ಮಾತ್ರ ದರ್ಶನಕ್ಕೆ ಅವಕಾಶ ನೀಡಲಾಗುತ್ತದೆ. ಉಳಿದ ಸಮಯದಲ್ಲಿ ಸಾಮಾನ್ಯ ಭಕ್ತರಿಗೆ ದರ್ಶನ ಇರಲಿದೆ.
ದರ್ಶನಕ್ಕೆ ಬರುವ ಭಕ್ತರ ಸೌಲಭ್ಯಕ್ಕಾಗಿ ಕುಡಿಯುವ ನೀರು, ಮಜ್ಜಿಗೆ, ವೈದ್ಯಕೀಯ ಸಹಾಯ, ಅಗ್ನಿಶಾಮಕ ದಳ ಮತ್ತು ಪೊಲೀಸ್ ಭದ್ರತೆ ಸೇರಿದಂತೆ ಎಲ್ಲಾ ವ್ಯವಸ್ಥೆಗಳನ್ನು ಮಾಡಲಾಗಿದೆ. ಹಾಸನಾಂಬೆ ದರ್ಶನಕ್ಕಾಗಿ ಆನ್‌ಲೈನ್ ಬುಕ್ಕಿಂಗ್ ಹಾಗೂ ವಾಟ್ಸ್ಯಾಪ್ ಚಾಟ್‌ಬಾಟ್ ಸೇವೆಗಳನ್ನು ಪರಿಚಯಿಸಲಾಗಿದೆ. ಎಐ ತಂತ್ರಜ್ಞಾನ ಮೂಲಕ ದೇವಿಯ ದರ್ಶನದ ಮಾಹಿತಿ ಪಡೆಯುವ ವ್ಯವಸ್ಥೆಯೂ ಇದೆ.
ಜಾತ್ರೆ ಪ್ರಯುಕ್ತ ವಸ್ತು ಪ್ರದರ್ಶನ, ಡಾಗ್ ಶೋ, ಪಾಕ ಸ್ಪರ್ಧೆ, ಹೆಲಿ ಟೂರಿಸಂ ಹಾಗೂ ಫಲಪುಷ್ಪ ಪ್ರದರ್ಶನ ಸೇರಿದಂತೆ ಹನ್ನೆರಡು ಟೂರ್ ಪ್ಯಾಕೇಜ್‌ಗಳನ್ನು ಪರಿಚಯಿಸಲಾಗಿದೆ.
ಈ ಬಾರಿ ದೇವಾಲಯಕ್ಕೆ ಬರುವ ಭಕ್ತರಿಗೆ ಡ್ರೆಸ್ ಕೋಡ್ ನಿಗದಿಪಡಿಸಲಾಗಿದ್ದು, ಸಾಂಪ್ರದಾಯಿಕ ಉಡುಗೆಯಲ್ಲಿ ಮಾತ್ರ ದೇವಿ ದರ್ಶನಕ್ಕೆ ಅನುಮತಿ ನೀಡಲಾಗುತ್ತದೆ ಎಂದು ಡಿಸಿ ಕೆ.ಎಸ್. ಲತಾ ಕುಮಾರಿ ಮನವಿ ಮಾಡಿದ್ದಾರೆ.
ನಿಮ್ಮ ಪ್ರತಿಕ್ರಿಯೆ ಏನು?