ಧಾರಾಕಾರ ಮಳೆಗೆ ತತ್ತರಿಸಿದ ಉತ್ತರ ಭಾರತ: ಜಮ್ಮು ಕಾಶ್ಮೀರದಲ್ಲಿ 45 ಮಂದಿ ಸಾವು
ಉತ್ತರ ಭಾರತ:- ಧಾರಾಕಾರ ಮಳೆಗೆ ಉತ್ತರ ತತ್ತರಿಸಿದೆ. ಹಿಮಾಚಲ ಪ್ರದೇಶ, ಜಮ್ಮು ಕಾಶ್ಮೀರ, ಪಂಜಾಬ್ ಅಷ್ಟೇ ಅಲ್ಲ, ದಕ್ಷಿಣದ ತೆಲಂಗಾಣದಲ್ಲೂ ಪ್ರವಾಹ ರಣಾರ್ಭಟ ಸೃಷ್ಟಿಯಾಗಿದೆ.
ಜಮ್ಮು ಮತ್ತು ಕಾಶ್ಮೀರದಲ್ಲಿ ಸಾಮಾನ್ಯಕ್ಕಿಂತ ಶೇಕಡ 260 ರಷ್ಟು ಹೆಚ್ಚಿನ ಮಳೆಯಾಗಿದೆ. ಉಧಂಪುರದಲ್ಲಿ ಒಂದೇ ದಿನದಲ್ಲಿ 629.4 ಮಿಲಿ ಮೀಟರ್ ಮಳೆಯಾಗಿದ್ದು, ಜಮ್ಮುವಿನ ಕೆಲ ಜಿಲ್ಲೆಗಳು ಕೆರೆಗಳಂತೆ ಬದಲಾಗಿವೆ. ಅನಂತ್‌ನಾಗ್ ಜಿಲ್ಲೆ, ದೋಡಾ ಜಿಲ್ಲೆ, ಕುಲ್ಗಮ್ ಜಿಲ್ಲೆಗಳು ಹೆಚ್ಚು ಹಾನಿಗೊಳಗಾಗಿವೆ. ಪ್ರತಿಯೊಂದು ಜಿಲ್ಲೆಯಲ್ಲೂ ಶೇಕಡ 500ಕ್ಕಿಂತ ಹೆಚ್ಚು ಮಳೆ ಸುರಿದ ಬಗ್ಗೆ ದಾಖಲಾಗಿದೆ.
ಜಮ್ಮು ಪ್ರದೇಶದಲ್ಲಿ ದಾಖಲೆಯ ಮಳೆಯಿಂದಾಗಿ ಅಪಾರ ಹಾನಿ ಸಂಭವಿಸಿದ್ದು, ಮಳೆ ಸಂಬಂಧಿತ ಘಟನೆಗಳಲ್ಲಿ ಸಾವನ್ನಪ್ಪಿದವರ ಸಂಖ್ಯೆ 45 ಕ್ಕೆ ಏರಿದೆ. ಹವಾಮಾನ ವೈಪರೀತ್ಯದಿಂದಾಗಿ ನಿನ್ನೆ ದಿನವೂ ಶಾಲೆಗಳು ಕ್ಲೋಸ್ ಆಗಿತ್ತು. ಮುನ್ನೆಚ್ಚರಿಕೆ ಕ್ರಮವಾಗಿ ಜಮ್ಮು ಮತ್ತು ಕಾಶ್ಮೀರ ಸರ್ಕಾರವು ಆಗಸ್ಟ್ 30 ರವರೆಗೆ ಜಮ್ಮು ಪ್ರದೇಶದ ಎಲ್ಲಾ ಶಾಲೆಗಳನ್ನು ಮುಚ್ಚುವಂತೆ ಆದೇಶಿಸಿದೆ.
ಪ್ರವಾಹ ಪೀಡಿತ ಜಮ್ಮು, ಸಾಂಬಾ, ಕಥುವಾ, ಪಠಾಣ್‌ಕೋಟ್ ಮತ್ತು ಗುರುದಾಸ್ಪುರದಲ್ಲಿ ಹಗಲು ರಾತ್ರಿ ರೈಸಿಂಗ್ ಸ್ಟಾರ್ ಕಾರ್ಪ್ಸ್ ನಿರಂತರ ರಕ್ಷಣಾ ಕಾರ್ಯಾಚರಣೆಯನ್ನ ಮುಂದುವರೆಸಿದೆ. ರಕ್ಷಣೆಗೆ ಅಂತ 20 ತಂಡಗಳನ್ನ ನಿಯೋಜಿಸಲಾಗಿದ್ದು, ಆರ್‌ಎಸ್ ಪುರದಲ್ಲಿನ ಅನಾಥಾಶ್ರಮದಿಂದ 50 ಮಕ್ಕಳು ಸೇರಿದಂತೆ 943 ಜನರನ್ನು ರಕ್ಷಿಸಿದೆ.
ಜಮ್ಮು ಜಿಲ್ಲೆಯ ಜೌರಿಯನ್‌ನಲ್ಲಿ ಪ್ರವಾಹಕ್ಕೆ ಸಿಲುಕಿದ್ದ ಜನರನ್ನ ಭಾರತೀಯ ಸೇನೆಯ ವೈಟ್ ನೈಟ್ ಕಾರ್ಪ್ಸ್‌ನ ಹೆಲಿಕಾಪ್ಟರ್ ರಕ್ಷಣೆ ಕಾರ್ಯ ಮುಂದುವರೆಸಿದೆ.
ನಿಮ್ಮ ಪ್ರತಿಕ್ರಿಯೆ ಏನು?