ಲಿವ್ ಇನ್ ಗೆಳೆಯನಿಗೆ ಇಷ್ಟವಿಲ್ಲದ್ದಕ್ಕೆ ಮಗುವನ್ನು ಕೆರೆಗೆ ಎಸೆದ ತಾಯಿ!
ಜೈಪುರ್: ರಾಜಸ್ಥಾನದ ಅಜ್ಮೀರ್ನಲ್ಲಿ ಶಾಕಿಂಗ್ ಘಟನೆ ಬೆಳಕಿಗೆ ಬಂದಿದೆ. ತನ್ನ ಮೊದಲ ಪತಿಯಿಂದ ಜನಿಸಿದ ಮಗು ಲಿವ್-ಇನ್ ಗೆಳೆಯನಿಗೆ ಇಷ್ಟವಿಲ್ಲ ಎಂಬ ಕಾರಣಕ್ಕೆ ಮಹಿಳೆಯೊಬ್ಬಳು ತನ್ನ ಮೂರು ವರ್ಷದ ಮಗಳನ್ನು ಕೆರೆಗೆ ಎಸೆದು ಹತ್ಯೆ ಮಾಡಿದ ಘಟನೆ ನಡೆದಿದೆ. ಹತ್ಯೆಗೈದ ಮಹಿಳೆಯನ್ನು ಅಂಜಲಿ (28) ಎಂದು ಗುರುತಿಸಲಾಗಿದ್ದು, ಆಕೆಯನ್ನು ಕ್ರಿಶ್ಚಿಯನ್ ಗಂಜ್ ಪೊಲೀಸರು ಬಂಧಿಸಿದ್ದಾರೆ.
ಪೊಲೀಸರು ನೀಡಿದ ಮಾಹಿತಿಯ ಪ್ರಕಾರ, ಅಂಜಲಿ ಮೊದಲು ಮಗುವಿಗೆ ಲಾಲಿ ಹಾಡಿ ಮಲಗಿಸಿ, ನಂತರ ಅನಾ ಸಾಗರ್ ಕೆರೆಯಲ್ಲಿ ಎಸೆದಿದ್ದಾಳೆ. ಬಳಿಕ ಮಗು ಕಾಣೆಯಾಗಿದೆ ಎಂದು ನಾಟಕವಾಡಿದ್ದಾಳೆ. ಪೊಲೀಸರು ಸಿಸಿಟಿವಿ ಪರಿಶೀಲಿಸಿದಾಗ, ಅಂಜಲಿ ತನ್ನ ಮಗಳನ್ನು ಎತ್ತಿಕೊಂಡು ನಗರದ ಅನಾ ಸಾಗರ್ ಕೆರೆಯ ಬಳಿ ಓಡಾಡಿದ್ದು ಪತ್ತೆಯಾಗಿತ್ತು. ಕೆಲವು ಗಂಟೆಗಳ ನಂತರ, ಬೆಳಗಿನ ಜಾವ 1:30ರ ಸುಮಾರಿಗೆ, ಮಹಿಳೆ ಒಬ್ಬಂಟಿಯಾಗಿ, ಮೊಬೈಲ್ನಲ್ಲಿ ಮಾತಾಡುತ್ತಿರುವುದು ಸೆರೆಯಾಗಿತ್ತು.
ಈ ದೃಶ್ಯಗಳು ಅವಳ ಹೇಳಿಕೆಗೆ ವಿರುದ್ಧವಾಗಿದ್ದು, ಅನುಮಾನ ಹುಟ್ಟಿಸಿತ್ತು. ಆಕೆಯನ್ನು ವಿಚಾರಣೆ ನಡೆಸಿದಾಗ ಕೊಲೆ ಮಾಡಿದ್ದನ್ನು ಒಪ್ಪಿಕೊಂಡಿದ್ದಾಳೆ ಎಂದು ತಿಳಿದು ಬಂದಿದೆ. ಅಂಜಲಿ ಒಬ್ಬಂಟಿಯಾಗಿ ಈ ಕೃತ್ಯ ಎಸಗಿದ್ದಾಳೆ ಎಂಬುದು ಗೊತ್ತಾಗಿದೆ. ಮಗಳಿಗೆ ಆಕೆಯ ಲಿವ್ ಇನ್ ಗೆಳೆಯ ಅಲ್ಕೇಶ್ ನಿರಂತರವಾಗಿ ನಿಂದಿಸುತ್ತಿದ್ದಿದ್ದರಿಂದ ಆಕೆ ಬೇಸತ್ತಿದ್ದಳು ಎಂದು ವರದಿಯಾಗಿದೆ.
ಈ ಕೊಲೆಯಲ್ಲಿ ಆಕೆಯ ಪ್ರಿಯಕರನ ಪಾತ್ರವಿದೆಯೇ ಎಂದು ತನಿಖೆ ನಡೆಸಲಾಗುತ್ತಿದೆ.ಅಂಜಲಿ ಉತ್ತರ ಪ್ರದೇಶದ ವಾರಣಾಸಿಯವಳು. ಪತಿಯಿಂದ ದೂರಾದ ನಂತರ ಆಕೆ ಅಜ್ಮೀರ್ಗೆ ತೆರಳಿ ತನ್ನ ಪ್ರಿಯಕರನೊಂದಿಗೆ ವಾಸವಾಗಿದ್ದಳು. ಅಲ್ಲಿ ಹೋಟೆಲ್ ಒಂದರಲ್ಲಿ ಸ್ವಾಗತಕಾರಳಾಗಿ ಕೆಲಸ ಮಾಡುತ್ತಿದ್ದಳು. ಅದೇ ಹೋಟೆಲ್ನಲ್ಲಿ ಅಲ್ಕೇಶ್ ಕೂಡ ಕೆಲಸ ಮಾಡುತ್ತಿದ್ದ.
ನಿಮ್ಮ ಪ್ರತಿಕ್ರಿಯೆ ಏನು?