ಶಿಕ್ಷಕರ ಕೊರತೆ: ಸರ್ಕಾರಿ ಶಾಲೆಗಳಿಗೆ ಬೀಗ ಹಾಕಲು ಮುಂದಾದ ರಾಜ್ಯ ಸರ್ಕಾರ!

ಬೆಂಗಳೂರು:- ಶಿಕ್ಷಕರ ಕೊರತೆ ಸರಿಪಡಿಸಲು ಶಿಕ್ಷಣ ಇಲಾಖೆ ಎಡವಟ್ಟು ಚಿಂತನೆಗೆ ಮುಂದಾಗಿರುವ ಅನುಮಾನ ವ್ಯಕ್ತವಾಗಿದೆ. ಹೌದು, ಶಿಕ್ಷಕರ ಕೊರತೆಯಿಂದ ಸರ್ಕಾರಿ ಶಾಲೆಗಳಿಗೆ ಬೀಗ ಹಾಕಲು ರಾಜ್ಯ ಸರ್ಕಾರ ಮುಂದಾಗಿದೆ.
ಕಾಂಗ್ರೆಸ್ ಸರ್ಕಾರ ‘ಹಬ್ ಅಂಡ್ ಸ್ಪೋಕ್’ ಹೆಸರಿನಲ್ಲಿ ಸರ್ಕಾರಿ ಶಾಲೆಗಳನ್ನು ಮುಚ್ಚಲು ಹೊರಟಿದೆ. ಸಂಯೋಜನೆ ಹೆಸರಿನಲ್ಲಿ ರಾಜ್ಯದ 4200 ಕ್ಕೂ ಹೆಚ್ಚು ಸರ್ಕಾರಿ ಶಾಲೆಗಳನ್ನು ಮುಚ್ಚಲು ಹೊರಟಿದೆ ಎಂದು ವಿದ್ಯಾರ್ಥಿ ಸಂಘಟನೆಗಳು ಆರೋಪಿಸಿದ್ದು, ಪ್ರತಿಭಟನೆ ಮೂಲಕ ಆಕ್ರೋಶ ವ್ಯಕ್ತಪಡಿಸಿವೆ.
ಈ ಹಿಂದೆ ಬಿಜೆಪಿ ರಾಜ್ಯ ಸರ್ಕಾರ ಕೂಡ ಇದೇ ನೆಪವೊಡ್ಡಿ NEP-2020ರ ಅಡಿಯಲ್ಲಿ 13,800 ಸರ್ಕಾರಿ ಶಾಲೆಗಳನ್ನು ಮುಚ್ಚಲು ಮುಂದಾಗಿತ್ತು. ಆಗ ವ್ಯಾಪಕ ಆಕ್ರೋಶ ವ್ಯಕ್ತವಾದ ನಂತರ ಯೋಜನೆ ಕೈಬಿಟ್ಟಿತ್ತು. ಆದರೆ ಈಗ ಮತ್ತೆ ಸರ್ಕಾರಿ ಶಾಲೆಗ ವಿಲೀನಕ್ಕೆ ಮುಂದಾಗಿರುವುದಕ್ಕೆ ವ್ಯಾಪಕ ವಿರೋಧ ವ್ಯಕ್ತವಾಗಿದೆ. ಎಐಡಿಎಸ್ಒ ರಾಜ್ಯ ಸಮಿತಿ ಹಾಗೂ ವಿದ್ಯಾರ್ಥಿ ಸಂಘಟನೆಗಳು ಪ್ರತಿಭಟನೆಗೆ ಮುಂದಾಗಿರುವುದಾಗಿ ಎಐಡಿಎಸ್ಒ ಅಧ್ಯಕ್ಷರಾದ ಅಭಯಾ ದಿವಾಕರ್ ತಿಳಿಸಿದ್ದಾರೆ.
ಕಡಿಮೆ ಹಾಜರಾತಿ ಇರುವ ಶಾಲೆಗಳನ್ನು ಇತರ ಶಾಲೆಗಳೊಂದಿಗೆ ಸಂಯೋಜನೆಗೊಳಿಸುವ ಹುನ್ನಾರಕ್ಕೆ ಮುಂದಾಗಿರುವುದಕ್ಕೆ ಪೋಷಕರ ವಲಯದಲ್ಲಿ ವಿರೋಧ ಕೇಳಿ ಬಂದಿದೆ. ಇತ್ತೀಚೆಗೆ ಸರ್ಕಾರ ತಾಲೂಕು ಮಟ್ಟದಲ್ಲಿ ಸುಧಾರಣ
ಸಮಿತಿ ರಚನೆಗೆ ಒಂದು ಸುತ್ತೋಲೆ ನೀಡಿದ್ದು ಆ ಸುತ್ತೋಲೆಯಲ್ಲಿ ‘ಹಬ್ ಆ್ಯಂಡ್ ಸ್ಪಕ್’ ಮಾಡೆಲ್ ಮೂಲಕ ಕಡಿಮೆ ಹಾಜರಾತಿ ಶಾಲೆಗಳ ಗುರುತಿಸಿ ಸಂಯೋಜನೆ ಬಗ್ಗೆ ಸೂಚನೆ ನೀಡಿದೆ.
10 ಕ್ಕಿಂತ ಕಡಿಮೆ ಮಕ್ಕಳಿರುವ ಶಾಲೆಯನ್ನು ಹಾಗೂ ಆ ಶಾಲೆಯ ಮಕ್ಕಳನ್ನು ಹೆಚ್ಚಿರುವ ಶಾಲೆಯ ಜೊತೆ ವಿಲೀನಗೊಳಿಸಲಾಗುತ್ತದೆ. ರಾಜ್ಯದಲ್ಲಿ ಸದ್ಯ 4 ಸಾವಿರಕ್ಕೂ ಹೆಚ್ಚು ಶಾಲೆಗಳಲ್ಲಿ ಕಡಿಮೆ ಹಾಜರಾತಿ ಇದೆ. ಈ ನೆಪದಡಿ ಸಂಯೋಜನೆ ಮಾಡಿ ಮುಚ್ಚುವ ಪ್ರಯತ್ನಕ್ಕೆ ಮುಂದಾಗಿರುವುದಕ್ಕೆ ವಿರೋಧ ಕೇಳಿ ಬರ್ತಿದೆ.
ನಿಮ್ಮ ಪ್ರತಿಕ್ರಿಯೆ ಏನು?






