ಸೈಫ್ ಅಲಿ ಖಾನ್ ಪುತ್ರನ ಕೊಠಡಿಗೆ ನುಗ್ಗಿದ ಆಗಂತುಕ: 1 ಕೋಟಿ ರೂ.ಗೆ ಬೇಡಿಕೆ ಇಟ್ಟಿದ್ದ ದುಷ್ಕರ್ಮಿ!

ಬಾಲಿವುಡ್ ನಟ ಸೈಫ್ ಅಲಿಖಾನ್ ಮನೆಗೆ ನುಗ್ಗಿದ ಕಳ್ಳನೊಬ್ಬ ಚಾಕುವಿನಿಂದ ಹಲ್ಲೆ ನಡೆಸಿದ್ದಾನೆ. ಗಂಭೀರವಾಗಿ ಗಾಯಗೊಂಡಿರುವ ನಟನನ್ನು ಮುಂಬೈನ ಲೀಲಾವತಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ತನಿಖೆ ಆರಂಭಿಸಿರುವ ಪೊಲೀಸರು ಸೈಫ್ ಅಲಿ ಖಾನ್ ನಿವಾಸದಲ್ಲಿ ಕೆಲಸಕ್ಕಿದ್ದ ಮೂವರು ಸಿಬ್ಬಂದಿಯಿಂದ ಹೇಳಿಕೆ ಪಡೆದುಕೊಂಡಿದ್ದಾರೆ.
ಇನ್ನೂ ನಟ ಸೈಫ್ ಅಲಿ ಖಾನ್ ಅವರ ಮನೆಗೆ ನುಗ್ಗಿ 6 ಬಾರಿ ಚಾಕುವಿನಿಂದ ಇರಿದು ಘಾಸಿಗೊಳಿಸಿದ್ದ ಶಂಕಿತ ಆರೋಪಿಯ ಫೋಟೋ ಮತ್ತು ಸಿಸಿಟಿವಿ ದೃಶ್ಯಾವಳಿ ಬಹಿರಂಗವಾಗಿದೆ.
ಬೆಳಗ್ಗಿನ ಜಾವ 2:33ಕ್ಕೆ ಸೈಫ್ ಅಲಿ ಖಾನ್ ಅವರ ಅಪಾರ್ಟ್‌ಮೆಂಟ್‌ನ ಮೆಟ್ಟಿಲುಗಳಲ್ಲಿ ಶಂಕಿತ ಆರೋಪಿ ಇಳಿದು ಹೋಗುತ್ತಿರುವುದು ಸಿಟಿಟಿವಿಯಲ್ಲಿ ಸೆರೆಯಾಗಿದೆ. ಈ ಬೆನ್ನಲ್ಲೇ ಮುಂಬೈ ಪೋಲೀಸರು ಪ್ರಕರಣದ ತನಿಖೆಯನ್ನು ಚುರುಕುಗೊಳಿಸಿದ್ದಾರೆ.
ಶಂಕಿತ ಆರೋಪಿಯ ಫೋಟೋ ಮತ್ತು ಸಿಸಿಟಿವಿ ದೃಶ್ಯಾವಳಿಗಳನ್ನು ಮುಂಬೈ ಪೊಲೀಸರೇ ಬಹಿರಂಗಪಡಿಸಿದ್ದಾರೆ. ಟೀ-ಶರ್ಟ್, ಜೀನ್ಸ್ ಪ್ಯಾಂಟ್ ಧರಿಸಿರುವ ಶಂಕಿತ, ಬ್ಯಾಗ್‌ವೊಂದನ್ನ ಹಾಕಿಕೊಂಡಿದ್ದಾನೆ. ಕಿತ್ತಳೆ ಬಣ್ಣದ ಸ್ಕಾಫ್ ಧರಿಸಿದ್ದಾನೆ. ಮೆಟ್ಟಿಲುಗಳಿಂದ ಇಳಿದು ಹೋಗುತ್ತಿರುವಾಗ ಸಿಟಿಟಿವಿ ಕ್ಯಾಮೆರಾ ನೋಡಿದ್ದು ವಿಡಿಯೋನಲ್ಲಿ ಸೆರೆಯಾಗಿದೆ.
1 ಕೋಟಿ ರೂ.ಗೆ ಬೇಡಿಕೆಯಿಟ್ಟಿದ್ದ ದುಷ್ಕರ್ಮಿ
ಸೈಫ್ ಅಲಿಖಾನ್ ಮನೆಯಲ್ಲಿ ಅಡುಗೆ ಮಾಡುವವರಲ್ಲಿ ಒಬ್ಬರಾದ ಎಲಿಯಾಮಾ ಫಿಲಿಪ್ಸ್ ಅಲಿಯಾಸ್ ಲಿಮಾ, ಶಂಕಿತನನ್ನ ಮೊದಲು ನೋಡಿದ್ದರಂತೆ. ದುಷ್ಕರ್ಮಿಯನ್ನ ನೋಡಿದ ಕೂಡಲೇ ಭಯದಲ್ಲಿ ಜೋರಾಗಿ ಕಿರುಚಿದ್ದಾರೆ. ಇದರಿಂದ ಎಚ್ಚರಗೊಂಡ ಸೈಫ್, ಹಂತಕನನ್ನ ಒಳ ನುಗ್ಗದಂತೆ ತಡೆಯಲು ಹೋರಾಡಿದ್ದಾರೆ. ಈ ವೇಳೆ ಹಂತಕ 6 ಬಾರಿ ಇರಿದು, ಎಡಗೈ ಮತ್ತು ಗುತ್ತಿಗೆ ಭಾಗವನ್ನ ಗಾಯಗೊಳಿಸಿದ್ದಾನೆ. ಹಂತಕ ಒಳ ನುಗ್ಗಲು ಪ್ರಯತ್ನಿಸಿದಾಗ ನಿನಗೇನು ಬೇಕು ಎಂದು ಕೇಳಲಾಗಿತ್ತಂತೆ. ಆಗ 1 ಕೋಟಿ ರೂ.ಗೆ ಬೇಡಿಕೆಯಿಟ್ಟಿದ್ದಾನೆ ಎಂದು ಆರೋಪಿಸಲಾಗಿದೆ. ದಾಳಿಯಲ್ಲಿ ಇಬ್ಬರು ಮನೆಯ ಸಹಾಯಕರೂ ಗಾಯಗೊಂಡಿದ್ದಾರೆ.
ನಿಮ್ಮ ಪ್ರತಿಕ್ರಿಯೆ ಏನು?






